ಮತ್ತೆ ಶುರುವಾಯಿತು ಬಿಜೆಪಿಯ ಶವ ರಾಜಕೀಯ!
ಬೆಂಗಳೂರು,ಫೆ.01:ದೇಶದ ರಾಜಧಾನಿಯಲ್ಲಿ ಕೇಂದ್ರ ವಿತ್ತ ಸಚಿವರು 2018-19ನೇ ಸಾಲಿನ ಆಯವ್ಯಯಗಳ ಬಜೆಟ್ ಮಂಡಿಸುತ್ತಿದ್ದರೆ, ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ರಾಜ್ಯ ಮುಖಂಡರು ಬುಧವಾರ ನಡೆದ ಕೊಲೆಯೊಂದಕ್ಕೆ ಕೋಮು ಬಣ್ಣ ಬಳಿಯುವತ್ತ ಮಗ್ನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು, ಮತ್ತೊಂದು ಹಿಂದೂ ಕಾರ್ಯಕರ್ತನ ಕೊಲೆ ನಡೆದಿದೆ ಎಂದು ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಇಡೀ ದೇಶ ಕೇಂದ್ರ ಬಜೆಟ್‌ನಲ್ಲಿ ಮುಳುಗಿ ಹೋಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರ ಈ ಆಲಾಪಕ್ಕೆ ತಕ್ಕನಾದ ಮೀಡಿಯಾ ಕವರೇಜ್ ಸಿಗದೇ ಹೋಗಿದೆ.
ಬುಧವಾರ ಸಂಜೆ ಬೆಂಗಳೂರಿನ ಜೆಸಿ ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ 28 ವರ್ಷದ ಯುವಕ ಸಂತೋಷ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡ ಬಿಜೆಪಿ ನಾಯಕರು, ಸಂತೋಷ್ ಕೊಲೆಗೆ ಧರ್ಮ ಮತ್ತು ರಾಜಕಾರಣದ ಕುಲಾವಿ ತೊಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಸಂತೋಷ್ ಕೊಲೆಯ ಆರೋಪಿಗಳಾದ ವಸೀಂ ಮತ್ತು ಫಿಲಿಪ್‌ರನ್ನು ಈಗಾಗಲೇ ಜೆಸಿ ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಾದ ಉಮರ್ ಮತ್ತು ಇರ್ಫಾನ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಇಂತಹ ಘಟನೆಗಳಾದಾಗ ಅದರ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊರಬೇಕು. ಹಾಗೂ ಯಡಿಯೂರಪ್ಪ ಅವರು ಕೇಳಿದ್ದರಲ್ಲಿ ತಪ್ಪಿಲ್ಲ. ಆದರೆ ಪ್ರಕರಣದ ತನಿಖೆಗೂ ಮುನ್ನವೇ ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳುವ ಮೂಲಕ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿರುವುದು ಸಮಾಜದ ಸ್ವಾಸ್ಥ್ಯ ಕದಡುವಂತಿದೆ.
ಬಿಜೆಪಿ ಮಾಡುತ್ತಿರುವ ಆರೋಪದ ಪ್ರಕಾರ ಸಂತೋಷ್ ಬುಧವಾರ ಸಂಜೆ ಚಿನ್ನಪ್ಪ ಗಾರ್ಡನ್‌ನಲ್ಲಿ ‘ಪರಿವರ್ತನಾ ಯಾತ್ರೆ’ಯ ಬ್ಯಾನರ್ ಕಟ್ಟುತ್ತಿದ್ದರು. ಆಗ ಸ್ಥಳಕ್ಕೆ ಏಕಾಏಕಿ ದೌಡಾಯಿಸಿದ ನಾಲ್ವರು ಯುವಕರು ಸಂತೋಶ್‌ರನ್ನು ಕೊಲೆ ಮಾಡಿದ್ದಾರೆ. ಆದರೆ ಘಟನೆ ನಡೆದಾಗ ಸಂತೋಷ್ ಜತೆಗೇ ಇದ್ದ ಸ್ನೇಹಿತ, ಅಶೋಕ್ ನೀಡಿರುವ ಹೇಳಿಕೆ ಪ್ರಕಾರ, ಕಳೆದ ಮೂರು-ನಾಲ್ಕು ತಿಂಗಳುಗಳ ಹಿಂದೆ ಸಂತೋಷ್ ಮತ್ತು ವಸೀಂಗೆ ಜಗಳವಾಗಿತ್ತು. ವಸೀಂ ಗಾಂಜಾ ವ್ಯಸನಿಯಾಗಿದ್ದು, ಯಾಕೆ ನಶೆ ಮಾಡುತ್ತೀಯಾ ಎಂಬುದಾಗಿ ಸಂತೋಶ್ ಪ್ರಶ್ನಿಸಿದ್ದನಂತೆ. ಅದಕ್ಕೆ ಅವರಿಬ್ಬರ ನಡುವೆ ವಾಗ್ವಾದವಾಗಿ ನಂತರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸಂತೋಷ್ ಹಾಗೂ ವಸೀಂ ತಮ್ಮನ ನಡುವೆ ಜಗಳವಾಗಿತ್ತು ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರಕಾರ ಸಂತೋಷ್ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿಯಿಲ್ಲ. “ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆಯಾಗಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಸೀಂರ ತಂದೆ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ತಿಳಿದಿದೆ. ಆದರೆ ಇಲ್ಲಿಯವರೆಗಿನ ತನಿಖೆಯಲ್ಲಿ ರಾಜಕೀಯ ಪ್ರೇರೇಪಣೆ ಪತ್ತೆಯಾಗಿಲ್ಲ. ನಶೆಯಲ್ಲಿದ್ದ ವಸೀಂ, ಫಿಲಿಪ್, ಇರ್ಫಾನ್ ಮತ್ತು ಉಮರ್ ಜತೆಗೆ ಸಂತೋಷ್ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ಚಾಕುವಿನಿಂದ ಇರಿಯಲಾಗಿದೆ. ನಂತರ ಸಂತೋಷ್ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಇಬ್ಬರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ,” ಎನ್ನುತ್ತಾರೆ. ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್‌ಗೆ ಎಂಟು ತಿಂಗಳ ಹಿಂದಷ್ಟೆ ಮದುವೆಯಾಗಿತ್ತು.
ಈ ನಡುವೆ, ಸಂತೋಷ್ ಕಾಂಗ್ರೆಸ್ ಪಕ್ಷದ ಪರವಾಗಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನುತ್ತಾರೆ ಸ್ಥಳೀಯ ಕಾರ್ಪೊರೇಟರ್ ನೇತ್ರಾವತಿ ಕೃಷ್ಣೇಗೌಡ. ಇವರು ರಾಮಸ್ವಾಮಿಪಾಳ್ಯವನ್ನು ಪಾಲಿಕೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯೆಯಾಗಿದ್ದಾರೆ.
ಬಿಜೆಪಿ ಟ್ವಿಟ್ಟರ್ ವಾರ್:
ಬಿ ಎಸ್ ಯಡಿಯೂರಪ್ಪ ಈ ಘಟನೆಯ ಸಂಬಂಧ ಮೂರು ಟ್ವೀಟ್‌ಗಳನ್ನು ಮಾಡಿದ್ದರೆ, ಬಿಜೆಪಿ ಪಕ್ಷದ ಖಾತೆಯಲ್ಲಿ ಎರಡು ಟ್ವೀಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಕೂಡ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನಸಾಮಾನ್ಯರಲ್ಲಿ ದ್ವೇಷ ಬೆಳೆಯುವ ಸಾಧ್ಯತೆಯೂ ಇದೆ. ಇತ್ತೀಚೆಗಷ್ಟೇ ಮಂಗಳೂರಿನ ಕಾಟಿಪಾಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಮತ್ತು ಪ್ರತೀಕಾರದ ಭಾಗವಾಗಿ ಬಷೀರ್ ಹತ್ಯೆಯಿಂದ ಈಗಷ್ಟೇ ಸಹಜ ಸ್ಥಿತಿಗೆ ಮರಳಿರುವ ರಾಜ್ಯಕ್ಕೆ ಅದೇ ರೀತಿಯ ಘಟನೆಗಳು ಮರುಕಳಿಸಬಾರದು ಎಂಬ ಕಳಕಳಿ ರಾಜಕೀಯ ಮುಖಂಡರಲ್ಲಿ ಇದೆಯಾ ಎಂಬುದನ್ನು ಪ್ರಶ್ನಿಸಬೇಕಿದೆ. ದೀಪಕ್ ರಾವ್, ಬಷೀರ್‌ರಂತ ಅಮಾಯಕರನ್ನು ರಾಜಕೀಯ ಲಾಭಕ್ಕಾಗಿ ಬಲಿಕೊಡುವ ಎಲ್ಲ ಪಕ್ಷಗಳ ರಾಜಕೀಯ ಹಿತಾಸಕ್ತಿಯನ್ನು ವಿರೋಧಿಸುವ ಅಗತ್ಯತೆ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿದೆ.
ಕೃಪೆ:-ಸಮಾಚಾರ ಡಾಟ್ ಕಂ
Comments
Post a Comment