ಪ್ರವಾಸಿಯ , ಪ್ರಯಾಸಕರ ಜೀವನ !


ವಿಶೇಷ ವರದಿ : ಬ್ರೇಕಿಂಗ್ ನ್ಯೂಸ್, ಮಂಗಳೂರು
ಫೆ : 03, ಶನಿವಾರ,

ಸೌದಿ ಅರೇಬಿಯಾದಿಂದ ತನ್ನ ರೂಮಿನಲ್ಲಿರುವ ಗೆಳೆಯ ಮುಸ್ತಫಾ ಮುಂದಿನ ವಾರ ಊರಿಗೆ ಹೋಗಲು ತೀರ್ಮಾನಿಸಿದಾಗ ಇಸಾಕ್ ತನ್ನ ತಾಯಿಗೆ ಒಂದು ಸೀರೆ ತಂದೆಗೆ ಒಂದು ಟಾರ್ಚ್ ಲೈಟ್ ಪಾರ್ಸೆಲ್ ಕಟ್ಟಿ ಕೊಡುತ್ತಾನೆ. ಇದನ್ನು ಕಂಡ ರೂಮಿನಲ್ಲಿರುವ ಹಿರಿಯ ವ್ಯಕ್ತಿ ಮೊಯ್ದಿನ್ ಹಾಜಿ “ಅಲ್ಲ ಇಸಾಕ್ ನೀನು ಪ್ರತಿಯೊಬ್ಬರೂ ಊರಿಗೆ ಹೋಗುವಾಗ ಹೀಗೆ ಪಾರ್ಸೆಲ್ ಕಟ್ಟಿ ಕೊಡುತ್ತಿಯ ವಿನಃ ನೀನು ಬಂದು ಐದು ವರ್ಷವಾಯಿತು ಇನ್ನೂ ಕೂಡ ಊರಿಗೆ ಹೋಗುವ ಚಿಂತೆ ನಿನಗಿಲ್ಲವಾ?” ಎಂದು ಇಸಾಕ್ ನನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಇಸಾಕ್ “ಹಾಗೆ ಹೋಗಲು ದುಡ್ಡು ಬೇಡವೇ ಹಾಜರೆ? ಇಷ್ಟರವರೆಗೆ ದುಡಿದ ಹಣವೆಲ್ಲಾ ಇಬ್ಬರು ತಂಗಿಯಂದಿರ ಮದುವೆ ಕಾರ್ಯಕ್ಕೆ ಮುಗಿಯಿತು. ಅದಲ್ಲದೆ ಊರಲ್ಲಿ ಮೂರು ತಿಂಗಳು ನಿಲ್ಲಲು ಹಣ ಎಲ್ಲಿಂದ?” ಎಂದು ಮೊಯ್ದಿನ್ ಹಾಜಿಯವರಲ್ಲಿ ಕೇಳಿದ. ಈ ವಿಷಯ ಕೇಳಿ ಬೇಸರಗೊಂಡ ಮೊಯ್ಡಿನ್ ಹಾಜಿ” ನೀನು ಮುಂದಿನವಾರ ಮುಸ್ತಫಾನೊಂದಿಗೇ ಊರಿಗೆ ಹೋಗಲು ಸಿದ್ದನಾಗಬೇಕು ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ನಾನು ಮಾಡುತ್ತೇನೆ. ಅಲ್ಲದೆ ನಿನಗೆ ಮೂರು ತಿಂಗಳು ಊರಲ್ಲಿ ನಿಲ್ಲಲು ಬೇಕಾಗುವ ಹಣವನ್ನು ನಾನು ಕೊಡುತ್ತೇನೆ. ನೀನು ಊರಿಗೆ ಹೋಗಿ ಒಂದು ಹುಡುಗಿ ನೋಡಿ ಮದುವೆಯಾಗು ನಿನಗೆ ಜೀವನ ಬೇಡವೇ” ಎಂದರು. ಇದಕ್ಕೆ ಇಸಾಕ್ ಕೂಡ ಸಮ್ಮತಿಸಿದನು.

ಅಂತೂ ಬಹಳ ಖುಷಿಯಿಂದ ಇಸಾಕ್ ತಾನು ಮುಂದಿನವಾರ ಮುಸ್ತಫಾನೊಂದಿಗೆ ಊರಿಗೆ ಬರುವ ವಿಚಾರವನ್ನು ತಂದೆತಾಯಿಗೆ ಫೋನ್ ಮಾಡಿ ತಿಳಿಸುತ್ತಾನೆ. ಇದನ್ನು ಕೇಳಿದ ಮನೆಯವರಿಗಂತೂ ಐದು ವರ್ಷದಿಂದ ನೋಡದ ಇಸಾಕ್ ನನ್ನು ನೋಡುವ ಕೂತುಹಲ ಮತ್ತು ಕಾತರ.

ಕೊನೆಗೂ ಆ ಇಸಾಕ್ ನ ನಿರೀಕ್ಷೆಯ ದಿನ ಬಂದೆ ಬಿಟ್ಟಿತು. ಅಂದು ರಾತ್ರಿ ಮುಸ್ತಫಾನೊಂದಿಗೆ ಹೊರಡಲು ತಯಾರಾದ ಇಸಾಕ್ ಮೊಯ್ದಿನ್ ಹಾಜಿಯವರ ಸಹಾಯದಿಂದ ಊರಿಗೆ ಬೇಕಾಗುವ ಸಾಮಾನುಗಳನ್ನು ಖರೀದಿಸಿ ಪ್ಯಾಕ್ ಮಾಡಿದ. ರಾತ್ರಿ ಮುಸ್ತಫಾ ಮತ್ತು ಇಸಾಕ್ ಹೊರಡಲು ಅನುವಾದಾಗ ಮೊಯ್ದಿನ್ ಹಾಜಿ ಬೀಳ್ಕೊಟ್ಟು ಇಸಾಕ್ ನಲ್ಲಿ ಹೇಳುತ್ತಾರೆ” ನೀನು ಊರಿಗೆ ಹೋಗಿ ಮುಟ್ಟಿದ ತಕ್ಷಣ ಫೋನ್ ಮಾಡಬೇಕು ಏಕೆಂದರೆ ನಿನಗೆ ಆ ಸಂತೋಷದ ಕ್ಷಣದಲ್ಲಿ ಯಾರನ್ನೂ ನೆನಪಾಗುವುದಿಲ್ಲ. ನನ್ನನ್ನು ಮಾತ್ರ ನೀನು ಮರೆಯಬಾರದು ನನಗೆ ಫೋನ್ ಮಾಡಲೇ ಬೇಕು” ಎನ್ನುತ್ತಾರೆ. ಅದಕ್ಕೆ ಇಸಾಕ್ “ಏನು ಹೇಳುತ್ತಿರೋ ಮೊಯ್ದಿನ್ ಹಾಜಿ ಈ ಲೋಕದಲ್ಲಿ ನಿಮ್ಮನ್ನು ನಾನು ಮರೆಯಲುಂಟೇ ನೀವು ಮಾಡಿದ ಉಪಕಾರಕ್ಕೆ” ಎಂದುತ್ತರಿಸುತ್ತಾನೆ.

ಹಾಗೆ ಮುಸ್ತಫಾ ಮತ್ತು ಇಸಾಕ್ ನನ್ನು ವಿಮಾನ ನಿಲ್ದಾಣದಿಂದ ಬೀಳ್ಕೊಟ್ಟು ಮೊಯ್ದಿನ್ ಹಾಜಿ ತನ್ನ ರೂಮಿನ ಕಡೆ ನಡೆಯುತ್ತಾರೆ. ಇತ್ತ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಇಸಾಕ್ ಮತ್ತು ಗೆಳೆಯ ಮುಸ್ತಫಾ ವಿಮಾನವೇರುತ್ತಾರೆ. ಮೇಲಕ್ಕೆ ಹಾರಿದ ವಿಮಾನದಲ್ಲಿ ತಮಗೆ ನೀಡಿದ ಆಹಾರವನ್ನು ಸೇವಿಸಿ ಇಬ್ಬರು ಮಿತ್ರರೂ ನಿದ್ರಿಸುತ್ತಾರೆ. ಅಂತೂ ಮುಂಬೈಯಲ್ಲಿ ವಿಮಾನ ಇಳಿಯಲು ತಯಾರಾದಾಗ ಮುಸ್ತಫಾನಿಗೆ ಎಚ್ಚರವಾಯಿತು. ಮುಸ್ತಫಾ ಎದ್ದು ನೋಡಿದಾಗ ಇಸಾಕ್ ಇನ್ನೂ ನಿದ್ದೆಯಲ್ಲೇ ಇದ್ದ. ಇಸಾಕ್ ನನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಇಸಾಕ್ ಅಲುಗಾಡಲೇ ಇಲ್ಲ. ಗಾಬರಿಯಾದ ಮುಸ್ತಫಾ ಗೆಳೆಯ ಇಸಾಕ್ ನ ಮುಖವನ್ನು ನೋಡಿದಾಗ ನಿಶ್ಚಲನಾದ ಇಸಾಕ್ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಅಪಾಯವನ್ನರಿತ ಮುಸ್ತಫಾ ವಿಮಾನದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ. ವಿಮಾನ ಮುಂಬೈಯಲ್ಲಿ ಇಳಿದಾಗ ನಿಲ್ದಾಣದಲ್ಲಿರುವ ವೈದ್ಯರು ಪರೀಕ್ಷಿಸಲಾಗಿ ‘ಇಸಾಕ್ ಬ್ರೈನ್ ಎಮರೆಜ್ ಆಗಿ ಒಂದು ಗಂಟೆಯ ಮೊದಲೇ ಮೃತಪಟ್ಟಿರುತ್ತಾನೆ’ ಎಂಬ ವಿಷಯ ತಿಳಿದು ಮುಸ್ತಫಾ ಕುಸಿದು ಬೀಳುತ್ತಾನೆ. ತದನಂತರ ಎಚ್ಚೆತ್ತು ಸುದಾರಿಸಿಕೊಂಡವನೇ ಮೊಯ್ದಿನ್ ಹಾಜಿಗೆ ಕರೆಮಾಡುತ್ತಾನೆ. ಕರೆ ಸ್ವೀಕರಿಸಿದ ಮೊಯ್ದಿನ್ ಹಾಜಿ “ಮಾಶಾ ಅಲ್ಲಾಹ್ ಮಬ್ರೂಕ್, ಎಲ್ಲಿ ಬೊಂಬಾಯಿಯಲ್ಲೋ? ಇಸಾಕ್ ಎಲ್ಲಿದ್ದಾನೆ? ಅವನಲ್ಲೊಮ್ಮೆ ಫೋನ್ ಕೊಡು” ಎನ್ನುತ್ತಾರೆ. ಏನು ಉತ್ತರಿಸಬೇಕೆಂದು ತೋಚದ ಮುಸ್ತಫಾ ಬಿಕ್ಕಿಬಿಕ್ಕಿ ಅಳುತ್ತಾ ಹೇಳುತ್ತಾನೆ “ಇಸಾಕ್ ನಮ್ಮನ್ನು ಬಿಟ್ಟು ಹೋಗಿರುತ್ತಾನೆ ಹಾಜರೇ. ನಾನು ಈಗ ಆಸ್ಪತ್ರೆಯಲ್ಲಿ ಇಸಾಕ್ ನ ಮಯ್ಯತಿನೊಂದಿಗೆ ಇದ್ದೇನೆ.” ಈ ಸುದ್ದಿ ಕೇಳಿದ ಮೊಯ್ದಿನ್ ಹಾಜಿ ಸಿಡಿಲೆರದವರಂತೆ ತಲೆಗೆ ಕೈಯಿಟ್ಟು ಅಳತೊಡಗಿದರು.


ಸ್ನೇಹಿತರೆ ಇದಾಗಿರುತ್ತದೆ ಗಲ್ಫ್ ನಲ್ಲಿರುವ ಪ್ರವಾಸಿಗಳ ಜೀವನ. ಮೇಣದ ಬತ್ತಿಯು ತಾನು ಕರಗಿ ತನ್ನ ಸುತ್ತಮುತ್ತ ಇರುವವರಿಗೆ ಬೆಳಕನ್ನು ನೀಡುವಂತೆ ತಮ್ಮ ಕುಟುಂಬದ ಸುಖ ಹಾಗು ಸಂತೃಪ್ತಿಗೋಸ್ಕರ ತಮ್ಮ ಇಷ್ಟಾರ್ಥಗಳನ್ನು ಬದಿಗೊತ್ತಿ ತಮ್ಮ ಜೀವನವನ್ನೇ ಸವೆಸುತ್ತಿದ್ದಾರೆ ಅನೇಕ ಗಲ್ಫ್ ಪ್ರವಾಸಿಗಳು. ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಕುಟುಂಬದ ಸಂತೋಷಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದಿನನಿತ್ಯ ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿದ್ದರೂ ಕುಟುಂಬದವರೆದುರು ತಮ್ಮ ಕಷ್ಟವನ್ನು ಮರೆಮಾಚುತ್ತಿದ್ದಾರೆ. ಆದುದರಿಂದ ಪ್ರವಾಸಿಗಳ ಕುಟುಂಬಸ್ಥರೆ ನೀವು ಪ್ರವಾಸಿಯ ಮುಖದಲ್ಲಿ ಕಾಣುವ ನಗುವಿನ ಹಿಂದೆ ಅನೇಕ ದುಖ ದುಮ್ಮಾನಗಳಿರುತ್ತದೆ. ಆತನ ನಗುವಿನ ಕಾರಣದಿಂದಾಗಿ ಪ್ರವಾಸಿಯನ್ನು ಯಾರೂ ತೂಗಿ ನೋಡಬೇಡಿ ಎಂಬುವುದು ನನ್ನ ಕಿವಿಮಾತಾಗಿದೆ. ತನ್ನ ಕುಟುಂಬದ ಸಂತೃಪ್ತಿಗೋಸ್ಕರ ತಾನು ಒಂದೊತ್ತು ಉಂಡು ತನ್ನ ಸಂಬಳವನ್ನು ಶೇಖರಿಸಿ ಕುಟುಂಬದವರಿಗೆ ಕಳುಹಿಸುವ ಅದೆಷ್ಟೋ ಪ್ರವಾಸಿ ಮಿತ್ರರನ್ನು ನಾನು ಕಣ್ಣಾರೆ ನೋಡಿದ್ದೇನೆ. ತನ್ನ ಜೀವನವನ್ನೇ ಕುಟುಂಬಕ್ಕಾಗಿ ಬಲಿಕೊಡುತ್ತಿರುವ ಇಸಾಕ್‌ನಂತಹ ಅದೆಷ್ಟೋ ಬಡಪಾಯಿ ಗಲ್ಫ್ ಪ್ರವಾಸಿಗಳು ನಮ್ಮ ಮುಂದಿದ್ದಾರೆ. ಪ್ರವಾಸಿಗಳಿಗೆ ತಮ್ಮ ಕುಟುಂಬದ ಮೇಲಿರುವ ಪ್ರೀತಿಯ ಅರ್ಧದಷ್ಟಾದರೂ ಪ್ರೀತಿ ಅಭಿಮಾನಗಳು ಕುಟುಂಬದವರಿಗೆ ಪ್ರವಾಸಿಯ ಮೇಲಿರಲಿ ಎಂಬುದಷ್ಟೇ ನನ್ನ ಕಳಕಳಿಯ ವಿನಂತಿ.!!

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ