ಶಾಸಕನಾದ ನನ್ನನ್ನೇ ಎನ್ಕೌಂಟರ್ ಮಾಡುತ್ತಾರಂತೆ ಈ ಫ್ಯಾಸಿಸ್ಟ್ ಗಳು ! ಬಿಜೆಪಿ ಸರಕಾರದ ವಿರುದ್ಧ ಮೆವಾನಿ ಕಿಡಿ !

ಫ್ಯಾಸಿಸಮ್ ಸೋಲಿಸಲು ದಲಿತ-ಮುಸ್ಲಿಮರ ಒಗ್ಗಟ್ಟು ಇಂದಿನ ಅಗತ್ಯ: ಎಸ್ ಐ ಓ ಅಖಿಲ ಭಾರತ ಸಮಾವೇಶದಲ್ಲಿ ಶಾಸಕ ಜಿಗ್ನೇಶ್ ಮೆವಾನಿ


ದೆಹಲಿ: ಮುಸ್ಲಿಮರು, ದಲಿತರು ಸೇರಿದಂತೆ ಅಲ್ಪಸಂಖ್ಯಾತ ವರ್ಗವನ್ನು ಧರ್ಮ ರಕ್ಷಣೆ, ಗೋಮಾತೆಯ ಹೆಸರಿನಲ್ಲಿ ದೌರ್ಜನ್ಯ, ಹಿಂಸೆಯ ಮೂಲಕ ದೇಶದಲ್ಲಿಂದು ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕಾದರೆ ಮುಸ್ಲಿಮ್ ಹಾಗೂ ದಲಿತ ಸಮುದಾಯಗಳು ಒಂದಾಗಿ ಹೋರಾಡಬೇಕಾದ ಸಮಯ ಬಂದಿದೆ ಎಂದು ಗುಜರಾತ್ ನ ವಡ್ಗಾಂವ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದರು.

ಅವರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (Sio) ದ ವತಿಯಿಂದ ದೆಹಲಿಯ ಜಾಮಿಯಾ ನಗರದಲ್ಲಿ ನಡೆಯುತ್ತಿರುವ ಎರಡನೇ ಅಖಿಲ ಭಾರತ ಸಮಾವೇಶದಲ್ಲಿ ಎರಡನೇ ದಿನದ ಮೊದಲ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು ತನ್ನ ವಿರುದ್ಧ ಮಾತನಾಡುವರನ್ನು ವ್ಯವಸ್ಥಿತವಾಗಿ ಮುಗಿಸಿಬಿಡುತ್ತಿದೆ. ಗುಜರಾತ್ ನಲ್ಲಿ ಶಾಸಕನಾಗಿ ಆಯ್ಕೆಯಾದ ನನ್ನನ್ನೇ ಅಧಿಕಾರಿಗಳ ಮೂಲಕ  ಎನ್ ಕೌಂಟರ್ ನಡೆಸಿ ಕೊಲ್ಲುವ ಸಂಚು ಮಾಡುವಂತಹ ಕೆಲಸಕ್ಕೆ ಕೈಹಾಕುತ್ತದೆಂದರೆ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಉದ್ದೇಶ ಸಾಧನೆಗಾಗಿ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ದೇಶದ ಯುವಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಮೆವಾನಿ ಅಭಿಪ್ರಾಯಪಟ್ಟರು.

ಕೇವಲ ದ್ವೇಷ ಹುಟ್ಟಿಸುವ ಆಯುಧ ಹೊಂದಿರುವ ಫ್ಯಾಸಿಸ್ಟ್ ಗಳನ್ನು ದೇಶದ ಯುವಜನತೆ ಪ್ರೀತಿ ವಿಶ್ವಾಸದ ಮೂಲಕ ಹೊಡೆದುರುಳಿಸಬೇಕು. 2019 ರ ಚುನಾವಣೆಯಲ್ಲಿ ಯುವಜನತೆಯು ಸಂಪೂರ್ಣ ಭಾಗವಹಿಸಿ, ದೇಶದ ದಿಕ್ಸೂಚಿಯನ್ನು ಬದಲಾಯಿಸಬೇಕು ಎಂದು ಹೇಳಿದರು.

ಮುಸ್ಲಿಮರ ಜೊತೆಗೆ ಗುರುತಿಸಿಕೊಳ್ಳುವುದೆಂದರೆ ನನಗೆ ನನ್ನ ಮನೆಮಂದಿಯ ಜೊತೆಗೆ ಇದ್ದ ಅನುಭವ ಆಗುತ್ತದೆ. ದೇಶದಲ್ಲಿ ಬದಲಾವಣೆ ಮಾಡುವ ತಾಕತ್ತು ನಮ್ಮ ದೇಶದ ಯುವಜನತೆಗಿದೆ ಎಂದು ತಿಳಿಸಿದ ಜಿಗ್ನೇಶ್, ಸುಳ್ಳು ಹೇಳುವುದನ್ನೇ ರೂಢಿ ಮಾಡಿಕೊಂಡು ಅಧಿಕಾರ ಹಿಡಿದವರನ್ನು ಜನತೆಯು ಈಗಾಗಲೇ ತಿರಸ್ಕರಿಸಿದ್ದು, ಅದರ ಫಲಿತಾಂಶವು 2019 ರಲ್ಲಿ ನಾವು ಕಾಣಲಿದ್ದೇವೆ ಎಂದು ತಿಳಿಸಿದರು.

ಈ ಅಧಿವೇಶನದಲ್ಲಿ ಎಸ್ ಐ ಓ ರಾಷ್ಟ್ರೀಯ ಕಾರ್ಯದರ್ಶಿ ತೌಸೀಫ್ ಅಹ್ಮದ್ ಮಡಿಕೇರಿ, ಕ್ವಿಲ್ ಫೌಂಡೇಶನ್ ನ ನಿರ್ದೇಶಕ ಸುಹೈಲ್ ಕೆ.ಕೆ, ಆರ್ ಟಿ ಇ ಫೋರಂನ ರಾಷ್ಟ್ರೀಯ ಸಂಚಾಲಕ ಅಂಬರೀಶ್ ರೈ ಮಾತನಾಡಿದರು.

ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಟಿ. ಆರಿಫ್ ಅಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ