ಉಲ್ಟಾ ಹೊಡೆದ ಬಿಜೆಪಿ ಪ್ಲ್ಯಾನ್ ! ರಾಜಸ್ಥಾನದಲ್ಲಿ ಕೆಲವು ಕಡೆ ಬಿಜೆಪಿಗೆ ಒಂದು ಮತವೂ ಬಿದ್ದಿಲ್ಲ !
ಉಲ್ಟಾ ಹೊಡೆದ ಬಿಜೆಪಿ ಪ್ಲ್ಯಾನ್ ! ರಾಜಸ್ಥಾನದಲ್ಲಿ ಕೆಲವು ಕಡೆ ಬಿಜೆಪಿಗೆ ಒಂದು ಮತವೂ ಬಿದ್ದಿಲ್ಲ !

ಬ್ರೇಕಿಂಗ್ ನ್ಯೂಸ್, ಮಂಗಳೂರು...
ಜೈಪುರ,ಫೆ.09: 0, 1, 2… ಇದು ಇತ್ತೀಚೆಗೆ ಮುಗಿದ ರಾಜಸ್ಥಾನ ಉಪಚುನಾವಣೆಯಲಪ್ಲವು ಮತಗಟ್ಟೆಗಳಲ್ಲಿ ಆಡಳಿತರೂಢ ಬಿಜೆಪಿಗೆ ಬಿದ್ದ ಮತಗಳ ಸಂಖ್ಯೆ.
ಉಪಚುನಾವಣೆ ಮುಗಿದ ನಂತರ ಹೊರ ಬಿದ್ದಿರುವ ಮತಗಟ್ಟೆವಾರು ಮತಗಳ ಸಂಖ್ಯೆ ಬಿಜೆಪಿಯನ್ನು ಬೆಚ್ಚಿ ಬೀಳಿಸಿದೆ. ಈ ಮಾಹಿತಿಗಳು ಕಾಂಗ್ರೆಸ್ ವಿರುದ್ಧ ಬಿಜೆಪಿ ಹೀನಾಯವಾಗಿ ಸೋತ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ.
ಅಜ್ಮೇರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಅಜ್ಮೇರ್ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಮತ್ತು ಜೈಪುರ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಬರುತ್ತದೆ. ಈ 8 ಕ್ಷೇತ್ರಗಳಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ.
ಇಲ್ಲಿನ ನಸೀರಾಬಾದ್ ವಿಧಾನಸಭೆ ಕ್ಷೇತ್ರದ 223ನೇ ಮತಗಟ್ಟೆಯಲ್ಲಂತೂ ಬಿಜೆಪಿಗೆ ಕೇವಲ ಒಂದು ಮತ ಬಿದ್ದಿದೆ. ಇಲ್ಲಿ ಕಾಂಗ್ರೆಸ್ ಪಡೆದ ಮತಗಳ ಸಂಖ್ಯೆ 582. ಮತಗಟ್ಟೆ ಸಂಖ್ಯೆ 224ರಲ್ಲಿ ಬಿಜೆಪಿ ಎರಡು ಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ ಗೆ ಬಿದ್ದ ಮತಗಳ ಸಂಖ್ಯೆ 500.
ಆದರೆ ಇದಕ್ಕಿಂತಲೂ ಆಡಳಿತರೂಢ ಬಿಜೆಪಿಗೆ ಆಘಾತ ನೀಡಿರುವುದು ದುಧು ಕ್ಷೇತ್ರದ ಮತಗಟ್ಟೆ 49. ಇಲ್ಲಿ ಬಿಜೆಪಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಇಲ್ಲಿನ ಮತಗಟ್ಟೆಯಲ್ಲಿದ್ದ ಬಿಜೆಪಿ ಏಜೆಂಟ್ ಗಳೂ ಪಕ್ಷಕ್ಕೆ ಮತ ಹಾಕಿಲ್ಲ. ಇದೇ ವೇಳೆ ಕಾಂಗ್ರೆಸ್ ಇಲ್ಲಿ 337 ಮತಗಳನ್ನು ಪಡೆದುಕೊಂಡಿದೆ..
ಇನ್ನು ಅಲ್ವಾರ್ ಲೋಕಸಭೆ ಸ್ಥಾನವನ್ನು ಬಿಜೆಪಿ 2014ರಲ್ಲಿ 2.5 ಲಕ್ಷ ಮತಗಳಿಂದ ಗೆದ್ದುಕೊಂಡಿತ್ತು. ಅದೇ ಕ್ಷೇತ್ರದದಲ್ಲೀಗ ಉಪಚುನಾವಣೆಯಲ್ಲಿ 2 ಲಕ್ಷ ಮತಗಳಿಂದ ಬಿಜೆಪಿ ಸೋಲು ಕಂಡಿದೆ.
ಇನ್ನು ಮಂಡಲ್ ಗರ್ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 12,000 ಮತಗಳಿಂದ ಜಯ ಸಾಧಿಸಿದೆ. ಪಕ್ಷದ ಬಂಡಾಯ ಅಭ್ಯರ್ಥಿ ಇಲ್ಲಿ ಶೇಕಡಾ 22 ಮತಗಳನ್ನು ಪಡೆದಿದ್ದಾರೆ. ಹೀಗಿದ್ದೂ ಕಾಂಗ್ರೆಸ್ ಗೆಲುವಿಗೆ ಏನೂ ಅಡ್ಡಿಯಾಗಿಲ್ಲ ಎಂಬುದು ವಿಶೇಷ.
2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 200ರಲ್ಲಿ 163 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜಸ್ಥಾನದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.
ಆದರೆ ಈಗ ಪರಿಸ್ಥಿತಿ ಭಿನ್ನವಾಗಿದ್ದು ಬಿಜೆಪಿ ಕಾರ್ಯಕರ್ತರು, ಬೂತ್ ಏಜೆಂಟ್ ಗಳೇ ಪಕ್ಷಕ್ಕೆ ಮತ ಹಾಕಲು ಸಿದ್ಧವಿಲ್ಲ. ರಾಜಸ್ಥಾನದಲ್ಲಿ ಈ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯಲಿದ್ದು ಪಕ್ಷದ ಸದ್ಯದ ಪರಿಸ್ಥಿತಿ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.

Comments
Post a Comment